ಫಾಸ್ಫೇಟ್ ಉಂಡೆಗಳು - 
ಉಂಡೆಗಳ ರೂಪದಲ್ಲಿ ದೊರೆಯುವ ಕ್ಯಾಲ್ಸಿಯಮ್ ಫಾಸ್ಛೇಟ್ ಖನಿಜ (ಫಾಸ್ಛೇಟ್ ನಾಡ್ಯೂಲ್ಸ್). ಈ ಉಂಡೆಗಳ ನಿಕ್ಷೇಪ ತಿರುಚ್ಚೀರಪಳ್ಳಿ ಬಳಿಯ ಕ್ರಿಟೇಷಿಯಸ್ ಸ್ತರ ಸಮೂಹಗಳ ಉಟತ್ತೂರು ವಿಭಾಗದಲ್ಲಿ ಕಂಡುಬಂದಿದೆ. ಇಲ್ಲಿಯ ಶಿಲಾವಿಧಗಳಾದ ಜೇಡಿಮಣ್ಣು ಮತ್ತು ಮರಳುಪೂರಿತ ಜೇಡಿಮಣ್ಣುಗಳಲ್ಲಿ ಈ ಉಂಡೆಗಳು ವಿಶೇಷವಾಗಿ ಸಿಕ್ಕುತ್ತವೆ. ಇವುಗಳೊಡನೆ ಸುಣ್ಣದ ಉಂಡೆಗಳೂ ಜಿಪ್ಸಮ್ ಮತ್ತು ಸೆಲೆಸ್ಟೈಟ್ ಖನಿಜಗಳೂ ಕಂಡು ಬರುತ್ತವೆ. ಭಾರತದಲ್ಲಿ ಫಾಸ್ಛೇಟ್ ಖನಿಜ ಈ ಉಂಡೆಗಳ ರೂಪದಲ್ಲಿ ಬೇರೆಲ್ಲೂ ಸಿಕ್ಕಿಲ್ಲ.

	ಫಾಸ್ಛೇಟ್ ಉಂಡೆಗಳು ಮೇಲ್ಭಾಗದಲ್ಲಿ ಕಂದು, ಹಳದಿ ಮತ್ತು ಬೂದು ಬಣ್ಣವಾಗಿಯೂ ಒಳಭಾಗದಲ್ಲಿ ಬೂದುಗಪ್ಪು ಅಥವಾ ಕಪ್ಪು ಬಣ್ಣವಾಗಿಯೂ ಇವೆ. ಉಂಡೆಗಳ ಮೇಲ್ಪದರ ಸಾಧಾರಣವಾಗಿ ಸುಣ್ಣಪೂರಿತವಾಗಿದ್ದು ಒಳಭಾಗದಲ್ಲಿ ಕ್ಯಾಲ್ಸಿಯಮ್ ಫಾಸ್ಛೇಟ್ ಖನಿಜ ಕಂಡುಬರುತ್ತದೆ. ಉಂಡೆಗಳಲ್ಲಿ ಜಿಪ್ಸಮ್ ಮತ್ತು ಸೆಲೆಸ್ಟೈಟ್ ಖನಿಜಗಳ ಎಳೆಗಳೂ ಅಲ್ಲಲ್ಲಿ ಜೀವ್ಯವಶೇಷಗಳೂ ಕಾಣುತ್ತವೆ. ಉಂಡೆಗಳ ತೆಳು ಪೊರೆಗಳನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದಾಗ ಪೊರಾಮಿನಿಫೆರ ಮತ್ತು ರೇಡಿಯೊಲೇರಿಯಾ ಮೊದಲಾದ ಪ್ರಾಣಿಗಳ ಗುಂಪಿಗೆ ಸೇರಿದ ಜೀವಿಗಳು ಕಂಡುಬಂದಿವೆ.

	ಉಟತ್ತೂರು ವಿಭಾಗದ ಸುಮಾರು 30 ಚದರ ಕಿಲೊಮೀಟರುಗಳಷ್ಟು ಪ್ರದೇಶದಲ್ಲಿ ಫಾಸ್ಛೇಟ್ ಉಂಡೆಗಳ ನಿಕ್ಷೇಪ ಕಂಡುಬಂದು ಅಲ್ಲಲ್ಲಿ ಮಾತ್ರ ಸಾಂದ್ರಿಕೃತವಾಗಿವೆ. 60 ಮೀಟರುಗಳಷ್ಟು ಕೆಳಗಿನವರೆಗೆ ಈ ಪ್ರದೇಶದಲ್ಲಿ ಸುಮಾರು 80 ಲಕ್ಷ ಟನ್ನುಗಳಷ್ಟು ಫಾಸ್ಛೇಟ್ ಉಂಡೆಗಳ ನಿಕ್ಷೇಪವಿದೆಯೆಂದು ಭೂವೈಜ್ಞಾನಿಕ ಶೋಧನೆಗಳಿಂದ ನಿರ್ಧರಿಸಲಾಗಿದೆ. ಫಾಸ್ಛೇಟ್ ಉಂಡೆಗಳನ್ನು ಮುಖ್ಯವಾಗಿ ಕೃತಕ ಗೊಬ್ಬರದ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಆದರೆ ಇಲ್ಲಿಯ ಖನಿಜ, ಗೊಬ್ಬರದ ತಯಾರಿಕೆಗೆ ಅಷ್ಟು ಉತ್ಕøಷ್ಟವಲ್ಲವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
(ಎಂ.ವಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ